Friday, October 31, 2008

ಇದ್ದಿದ್ದು ಇದ್ದಂಗೆ

ನನ್ನ ಸಿನಿಮಾ ಹುಚ್ಚು ಇಂದು ನೆನ್ನೆಯದಲ್ಲ. ಈ ಹುಚ್ಚಿನ ಕಿಚ್ಚು ಹಚ್ಚಿದ್ದು ಕನಸುಗಾರನ "ರಣಧೀರ"(1988). ಅದು ನಾನು ನೋಡಿದ (ತಿಳುವಳಿಕೆ ಬಂದ ಮೇಲೆ) ಮೊದಲ ಚಿತ್ರ. ಆಗಿನ್ನೂ ನನಗೆ 6 ವರ್ಷ. ಅಲ್ಲಿಂದ ಮುಂದೆ ನೋಡಿದ್ದೆಲ್ಲವೂ ಬರೀ ಮನರಂಜನೆಯ ದೃಷ್ಟಿಯಿಂದ... ಉಪ್ಪಿಯ "A" ನೋಡೋವರೆಗೂ. ಆ ಚಿತ್ರ ನನ್ನನ್ನು ಚಿತ್ರ ನಿರ್ಮಾಣದ ವಿವಿಧ ಆಯಾಮಗಳತ್ತ ಮುಖ ಮಾಡಿ ನಿಲ್ಲಿಸಿತ್ತು. ಮೂರು ದಿನಗಳಾದ ನಂತರವೂ ಅದೇ ದೃಷ್ಯಗಳು... ನಿಂತಲ್ಲಿ, ಕೂತಲ್ಲಿ ಕನಸಲ್ಲಿ ಕಾಡತೊಡಗಿದವು. ಅಂಥಃ ಪರಿಣಾಮ ಬೀರಿತ್ತು ಆ ಚಿತ್ರ ನನ್ನ ಮೇಲೆ. ಅಲ್ಲಿಂದಾಚೆಗೆ ನನ್ನ ಚಿತ್ರ ವೀಕ್ಷಣೆಗೆ ಹಲವಾರು ಆಯಾಮಗಳು ದೊರೆತವು. ಚಿತ್ರದ ತಾಂತ್ರಿಕ ಮೌಲ್ಯಗಳತ್ತ, ಕಥೆ ಚಿತ್ರಕಥೆಗಳತ್ತ ಗಮನ ಹರಿಯತೊಡಗಿತು... ಈ ಕಥೆ ಹೇಗೆ ಹುಟ್ಟುಕೊಂಡಿರಬಹುದು? ಅದು ಚಿತ್ರಕಥೆಯಾಗಿ ಹೇಗೆ ಮಾರ್ಪಾಡಾಗಿರಬಹುದು? ಅದನ್ನು ಹೇಗೆ ಚಿತ್ರೀಕರಿಸಿರಬಹುದು? ಇತ್ಯಾದಿ ಇತ್ಯಾದಿ... ಇತರ ಭಾಷೆಗಳು ಅರ್ಥವಾಗತೊಡಗಿದಂತೆ ಅಯಾ ಭಾಷೆಯ ಚಿತ್ರಗಳನ್ನೂ ನೋಡತೊಡಗಿದೆ. ಕಳೆದೆರಡು ವರ್ಷಗಳಲ್ಲಿ ಅಂತರರಾಷ್ಟ್ರೀಯ (maximum Korean) ಚಲನಚಿತ್ರಗಳನ್ನು ನೋಡುವ ಅವಕಾಶಗಳೂ ದೊರೆತವು. ಇದೆಲ್ಲದರ ಪರಿಣಾಮವಾಗಿ ಸಿನೆಮಾ ಹುಚ್ಚು ಇನ್ನೂ ಹೆಚ್ಚಾಗುತ್ತಲೇ ಇದೆ...

ಅದರ ಫಲಶೃತಿಯೇ ಈ ಅಂಕಣ. ಚಿತ್ರರಂಗದ (mostly ಕನ್ನಡ) ಬಗ್ಗೆ ವಾರಕ್ಕೊಮ್ಮೆ(ಪ್ರತಿ ಶುಕ್ರವಾರ) ಬರೆಯುವ ಪ್ರಯತ್ನ. ಏನೂ ಬರೆಯಬಹುದು... ವಿಮರ್ಶೆ (ನನಗೆ ತಿಳಿಯುವಷ್ಟು) ಅಥವಾ ಮಾಹಿತಿ ಅಥವಾ ಹೀಗೆ ಸುಮ್ಮನೆ ಏನೋ ಹರಟೆ. ಈಗ ಇವ್ನು ಬರೀತಿರೋದೆ ಓದಲ್ಲ ಇನ್ನು ಇದೊಂದು ಬೇರೆ ಕೇಡು... ಸುಮ್ನೆ ಟೈಮ್ ವೇಸ್ಟ್ ಅಂತೀರಾ? ನಿಮ್ಗೆ ಓದಕ್ಕೆ ಬೇಜಾರಾಗ್ಬಹುದು ಆದ್ರೆ ನಂಗೆ ಚಿತ್ರಗಳ ಬಗ್ಗೆ ಬರೆಯೋಕೆ ಅದೆನೋ ಒಂತರಾ ಖುಷಿ. ಒಂತರಾ ಕೆರ್ಕೊಂಡು ಸುಖಪಟ್ಟಂಗೆ. ಹೆದ್ರುಕೊಬೇಡಿ... ತುಂಬಾ ಕೆರ್ಕೊಂಡು/ಕೆರ್ದು ಗಾಯ ಮಾಡಲ್ಲ...

ಕನ್ನಡ ರಾಜ್ಯೋತ್ಸವಕ್ಕಿಂತ ಒಳ್ಳೇ ದಿನ ಸಿಗುತ್ತಾ ಇದನ್ನ ಶುರು ಮಾಡೋಕೆ? ಅದಕ್ಕೆ ಸ್ವಾಮಿ ಇಂದೇ ತೆರೆಗೆ... ಈ ಹೊಸ ಪ್ರಯತ್ನ... "ಇದ್ದಿದ್ದು ಇದ್ದಂಗೆ"

ದೇವರ ಹೆಸರು ಹೇಳಿ ಶುರು ಮಾಡ್ತಿದೀನಿ... ಕನ್ನಡ ಚಿತ್ರರಂಗಕ್ಕೆ ಇನ್ಯಾರ್ರಿ ದೇವ್ರು? ಒಬ್ರೆ ತಾನೆ? ನಮ್ಮ ನಿಮ್ಮೆಲ್ಲರ "ಅಣ್ಣಾವ್ರು". ಕನ್ನಡ ಕಂಠೀರವ, ಗಾನ ಗಂಧರ್ವ, ನಟ ಸಾರ್ವಭೌಮ, ಚಿತ್ರರಂಗದ ಮೇರು ಪರ್ವತ ಡಾ|| ರಾಜ್ ಕುಮಾರ್ ಅವರಿಗೆ ನಮಿಸುತ್ತಾ....

No comments: