Friday, November 14, 2008

ಇದ್ದಿದ್ದು ಇದ್ದಂಗೆ - 3 : "ಫ್ರೆಶ್ ಕಾನ್ಸೆಪ್ಟು ಮಾಡಿದಾರು... ಹೊಸ ತರ ಕಥೆ ಮಾಡಿದಾರು"


ಶುಕ್ರವಾರ ಅಲ್ವಾ... ಹರಟೆ ಟೈಮು... ಈ ವಾರ ನಾನ್ ನೋಡಿದ್ ಒಂದ್ "ಹೊಸ ಸಿನಿಮಾ" ಪತ್ರಿಕಾಗೋಷ್ಠಿ ರಿಪೋರ್ಟು... ಇದ್ದಿದ್ ಇದ್ದಂಗೆ..

ಇದ್ದಿದ್ದು ಇದ್ದಂಗೆ - 3 : "ಫ್ರೆಶ್ ಕಾನ್ಸೆಪ್ಟು ಮಾಡಿದಾರು... ಹೊಸ ತರ ಕಥೆ ಮಾಡಿದಾರು"

ಓದಿ ಫೀಡ್ ಬ್ಯಾಕ್ ಹೇಳಿ... ನೆಕ್ಸ್ಟ್ ಫ್ರೈಡೆ ಮತ್ತೆ ಮೀಟಿಂಗು... ಅಲ್ಲಿವರ್ಗೂ ಕೀಪ್ ರಾಕಿಂಗು...


ಇದ್ದಿದ್ದು ಇದ್ದಂಗೆ - 2 : ಕಾಣೆಯಾದವರ ಬಗ್ಗೆ ಪ್ರಕಟಣೆ


ಈ ಹರಟೆ ಮಾಲೆಯ ಎರಡನೇ ಹರಟೆ "ಇದ್ದಿದ್ದು ಇದ್ದಂಗೆ - 2 : ಕಾಣೆಯಾದವರ ಬಗ್ಗೆ ಪ್ರಕಟಣೆ" ಇದೋ ನಿಮ್ಮ ಮುಂದಿದೆ.... ಇದನ್ನು ಓದುವ ಮೊದಲು... ಇದು ಕಾಣೆಯಾಗಿರುವ ಪ್ರತಿಭಾವಂತರೊಬ್ಬರನ್ನು ಹುಡುಕುವ ಪ್ರಯತ್ನವಷ್ಟೆ. ಅವರನ್ನು ವೈಭವೀಕರಿಸುವ ಪ್ರಯತ್ನವಲ್ಲ. ಅವರಿಗೆ ಈಗಲಾದರೂ ಎಚ್ಚೆತ್ತುಕೊಳ್ಳಲು ನಾವು ಬಾರಿಸುತ್ತಿರುವ ಎಚ್ಚರಿಕೆಯ ಘಂಟೆ...

ಇದ್ದಿದ್ದು ಇದ್ದಂಗೆ - 2 : ಕಾಣೆಯಾದವರ ಬಗ್ಗೆ ಪ್ರಕಟಣೆ

ಓದಿ ನಿಮ್ಮ ಅಭಿಪ್ರಾಯ ತಿಳಿಸಿ... ಮತ್ತೆ ಮುಂದಿನ ಶುಕ್ರವಾರ ಸಿಗೋಣ... ಮತ್ತೊಂದು ಹರಟೆಯೊಂದಿಗೆ

ಇಂತಿ
ಶ್ಯಾಮ

Tuesday, November 4, 2008

ಇದ್ದಿದ್ದು ಇದ್ದಂಗೆ - 1 : ಬೀಸುತ್ತಿದೆಯೇ ಬದಲಾವಣೆಯ ಗಾಳಿ?

"ಇದ್ದಿದ್ದು ಇದ್ದಂಗೆ" ಎಂಬ ಹೊಸ ಲೇಖನಮಾಲೆ ಶುರು ಮಾಡುವ ಸಾಹಸ ಮಾಡಿದ್ದೇನೆ. ಲೇಖನಮಾಲೆ ಅನ್ನೋದು ಬಹುಶಃ ದೊಡ್ಡ ಪದವಾಯಿತೇನೋ... ನಾನು ಲೇಖಕನೋ ಬರಹಗಾರನೋ ಅಲ್ಲ..ನಿಮ್ಮಂತೆ ಹವ್ಯಾಸಿ ಬ್ಲಾಗಿಗ... ಸೋ ಇದನ್ನ ನಮ್ಮ "ಹರಟೆ ಮಾಲೆ" ಅಂತ ಕರೆಯೋದು ಸೂಕ್ತ ಅನ್ಸತ್ತೆ. ಅಯ್ಯೋ ಹೋಗ್ಲಿ ಬಿಡಪ್ಪಾ ಹೆಸ್ರಲ್ಲೇನಿದೆ ಸ್ಟ್ರೇಟ್ ಆಗಿ ವಿಷಯಕ್ಕೆ ಬಾ ಅಂತೀರಾ? ಅದೂ ಸರೀನೇ... ಈ ಹೆಸರಿನಡಿ ಪ್ರತಿ ಶುಕ್ರವಾರ ಕನ್ನಡ ಚಿತ್ರರಂಗಕ್ಕೆ ಸಂಭಂದಿಸಿದ ಒಂದೊಂದು ವಿಶಯದ ಬಗ್ಗೆ ಹರಟೆ ಹೊಡೆಯೋದೆ ಇದರ ಗುರಿ... ಪ್ರಥಮ ಪ್ರಯತ್ನವಾಗಿ ಬರೆದ "ಬೀಸುತ್ತಿದೆಯೇ ಬದಲಾವಣೆಯ ಗಾಳಿ?" ಗಂಧದಗುಡಿಯ ಮುಖಪುಟದಲ್ಲಿ ಪ್ರಕಟವಾಗಿದೆ. "ಇಂಗೇ ಟೇಮ್ ಆದಾಗ ಅದ್ರು ಮ್ಯಾಗು ಒಂದ್ ಕಣ್ಣಾಯ್ಸಿ ಶಿವಾ..." ಓದಿ ನಿಮ್ಮ ಅಭಿಪ್ರಾಯಗಳನ್ನು ಇದ್ದಿದ್ ಇದ್ದಂಗೆ ಹೇಳ್ತೀರ ಅಂತ ನಂಬಿದ್ದೇನೆ... ಪ್ರತೀ ಶುಕ್ರವಾರವೂ... ಇದೋ ಇಲ್ಲಿದೆ ಅದರ ಕೊಂಡಿ (ಲಿಂಕು )...

ಇದ್ದಿದ್ದು ಇದ್ದಂಗೆ - 1 : ಬೀಸುತ್ತಿದೆಯೇ ಬದಲಾವಣೆಯ ಗಾಳಿ?

ಇದನ್ನು ಪ್ರಕಟಿಸಿದ ಗಂಧದ ಗುಡಿಗೆ ನನ್ನ ಅನಂತಾನಂತ ಧನ್ಯವಾದಗಳು.

Friday, October 31, 2008

ಇದ್ದಿದ್ದು ಇದ್ದಂಗೆ

ನನ್ನ ಸಿನಿಮಾ ಹುಚ್ಚು ಇಂದು ನೆನ್ನೆಯದಲ್ಲ. ಈ ಹುಚ್ಚಿನ ಕಿಚ್ಚು ಹಚ್ಚಿದ್ದು ಕನಸುಗಾರನ "ರಣಧೀರ"(1988). ಅದು ನಾನು ನೋಡಿದ (ತಿಳುವಳಿಕೆ ಬಂದ ಮೇಲೆ) ಮೊದಲ ಚಿತ್ರ. ಆಗಿನ್ನೂ ನನಗೆ 6 ವರ್ಷ. ಅಲ್ಲಿಂದ ಮುಂದೆ ನೋಡಿದ್ದೆಲ್ಲವೂ ಬರೀ ಮನರಂಜನೆಯ ದೃಷ್ಟಿಯಿಂದ... ಉಪ್ಪಿಯ "A" ನೋಡೋವರೆಗೂ. ಆ ಚಿತ್ರ ನನ್ನನ್ನು ಚಿತ್ರ ನಿರ್ಮಾಣದ ವಿವಿಧ ಆಯಾಮಗಳತ್ತ ಮುಖ ಮಾಡಿ ನಿಲ್ಲಿಸಿತ್ತು. ಮೂರು ದಿನಗಳಾದ ನಂತರವೂ ಅದೇ ದೃಷ್ಯಗಳು... ನಿಂತಲ್ಲಿ, ಕೂತಲ್ಲಿ ಕನಸಲ್ಲಿ ಕಾಡತೊಡಗಿದವು. ಅಂಥಃ ಪರಿಣಾಮ ಬೀರಿತ್ತು ಆ ಚಿತ್ರ ನನ್ನ ಮೇಲೆ. ಅಲ್ಲಿಂದಾಚೆಗೆ ನನ್ನ ಚಿತ್ರ ವೀಕ್ಷಣೆಗೆ ಹಲವಾರು ಆಯಾಮಗಳು ದೊರೆತವು. ಚಿತ್ರದ ತಾಂತ್ರಿಕ ಮೌಲ್ಯಗಳತ್ತ, ಕಥೆ ಚಿತ್ರಕಥೆಗಳತ್ತ ಗಮನ ಹರಿಯತೊಡಗಿತು... ಈ ಕಥೆ ಹೇಗೆ ಹುಟ್ಟುಕೊಂಡಿರಬಹುದು? ಅದು ಚಿತ್ರಕಥೆಯಾಗಿ ಹೇಗೆ ಮಾರ್ಪಾಡಾಗಿರಬಹುದು? ಅದನ್ನು ಹೇಗೆ ಚಿತ್ರೀಕರಿಸಿರಬಹುದು? ಇತ್ಯಾದಿ ಇತ್ಯಾದಿ... ಇತರ ಭಾಷೆಗಳು ಅರ್ಥವಾಗತೊಡಗಿದಂತೆ ಅಯಾ ಭಾಷೆಯ ಚಿತ್ರಗಳನ್ನೂ ನೋಡತೊಡಗಿದೆ. ಕಳೆದೆರಡು ವರ್ಷಗಳಲ್ಲಿ ಅಂತರರಾಷ್ಟ್ರೀಯ (maximum Korean) ಚಲನಚಿತ್ರಗಳನ್ನು ನೋಡುವ ಅವಕಾಶಗಳೂ ದೊರೆತವು. ಇದೆಲ್ಲದರ ಪರಿಣಾಮವಾಗಿ ಸಿನೆಮಾ ಹುಚ್ಚು ಇನ್ನೂ ಹೆಚ್ಚಾಗುತ್ತಲೇ ಇದೆ...

ಅದರ ಫಲಶೃತಿಯೇ ಈ ಅಂಕಣ. ಚಿತ್ರರಂಗದ (mostly ಕನ್ನಡ) ಬಗ್ಗೆ ವಾರಕ್ಕೊಮ್ಮೆ(ಪ್ರತಿ ಶುಕ್ರವಾರ) ಬರೆಯುವ ಪ್ರಯತ್ನ. ಏನೂ ಬರೆಯಬಹುದು... ವಿಮರ್ಶೆ (ನನಗೆ ತಿಳಿಯುವಷ್ಟು) ಅಥವಾ ಮಾಹಿತಿ ಅಥವಾ ಹೀಗೆ ಸುಮ್ಮನೆ ಏನೋ ಹರಟೆ. ಈಗ ಇವ್ನು ಬರೀತಿರೋದೆ ಓದಲ್ಲ ಇನ್ನು ಇದೊಂದು ಬೇರೆ ಕೇಡು... ಸುಮ್ನೆ ಟೈಮ್ ವೇಸ್ಟ್ ಅಂತೀರಾ? ನಿಮ್ಗೆ ಓದಕ್ಕೆ ಬೇಜಾರಾಗ್ಬಹುದು ಆದ್ರೆ ನಂಗೆ ಚಿತ್ರಗಳ ಬಗ್ಗೆ ಬರೆಯೋಕೆ ಅದೆನೋ ಒಂತರಾ ಖುಷಿ. ಒಂತರಾ ಕೆರ್ಕೊಂಡು ಸುಖಪಟ್ಟಂಗೆ. ಹೆದ್ರುಕೊಬೇಡಿ... ತುಂಬಾ ಕೆರ್ಕೊಂಡು/ಕೆರ್ದು ಗಾಯ ಮಾಡಲ್ಲ...

ಕನ್ನಡ ರಾಜ್ಯೋತ್ಸವಕ್ಕಿಂತ ಒಳ್ಳೇ ದಿನ ಸಿಗುತ್ತಾ ಇದನ್ನ ಶುರು ಮಾಡೋಕೆ? ಅದಕ್ಕೆ ಸ್ವಾಮಿ ಇಂದೇ ತೆರೆಗೆ... ಈ ಹೊಸ ಪ್ರಯತ್ನ... "ಇದ್ದಿದ್ದು ಇದ್ದಂಗೆ"

ದೇವರ ಹೆಸರು ಹೇಳಿ ಶುರು ಮಾಡ್ತಿದೀನಿ... ಕನ್ನಡ ಚಿತ್ರರಂಗಕ್ಕೆ ಇನ್ಯಾರ್ರಿ ದೇವ್ರು? ಒಬ್ರೆ ತಾನೆ? ನಮ್ಮ ನಿಮ್ಮೆಲ್ಲರ "ಅಣ್ಣಾವ್ರು". ಕನ್ನಡ ಕಂಠೀರವ, ಗಾನ ಗಂಧರ್ವ, ನಟ ಸಾರ್ವಭೌಮ, ಚಿತ್ರರಂಗದ ಮೇರು ಪರ್ವತ ಡಾ|| ರಾಜ್ ಕುಮಾರ್ ಅವರಿಗೆ ನಮಿಸುತ್ತಾ....

Saturday, October 4, 2008

ಆ ದ್ರೋಣಾಚಾರ್ಯ ಈ ಏಕಲವ್ಯ

ನನ್ನ ನಾನೇ ನಂಬಲಾರದಂಥಃ ಸನ್ನಿವೇಶ.... ಅಧ್ಬುತ.... ಕಿವಿಗಡಚಿಕ್ಕುವ ಕರತಾಡನದ ನಡುವೆ ನಾನು ವೇದಿಕೆಯತ್ತ ಸಾಗಿದೆ, ಪ್ರಶಸ್ತಿ ಸ್ವೀಕರಿಸಲು... ಎರಡೂ ಬದಿಗಳಲ್ಲಿ ಕುಳಿತ ಜನ ಎದ್ದು ನಿಂತು ಗೌರವ ಸೂಚಿಸುತ್ತಿದ್ದರು. ಕೆಲವರು ಕೈ ಕುಲುಕಿದರೆ ಕೆಲವರು ಬೆನ್ನು ತಟ್ಟುತ್ತಿದ್ದರು. ಎಲ್ಲರು ಹುರಿದುಂಬಿಸುವವರೆ...ನನಗೋ ಹೆಳತೀರದಷ್ಟು ಸಂತೋಷ.. ದೀಪಿಕಾ ಯುವರಾಜನಿಗೆ ಕೈ ಕೊಟ್ಟಾಗ ಧೋನಿಗಾದಷ್ಟು.... ಆಡಳಿತ ಸಿಕ್ಕಾಗ ಯೆಡ್ಡಿಗಾದಷ್ಟು...

ಅಂದು ನಾನು "Best JAVA Programmer of the Year" ಪ್ರಶಸ್ತಿ ಗೆದ್ದಿದ್ದೆ. ನಾನು ಸೋಲಿಸಿದ್ದು ಅಂಥಿಂಥವರನ್ನಲ್ಲ... ಸ್ವತಃ ಜೇಮ್ಸ್ ಗೋಸ್ಲಿಂಗ್ ನ ಪಟ್ಟ ಶಿಶ್ಯ ಹಲೋಶಿಯನ್ನ... ಜೇಮ್ಸ್ ಗೋಸ್ಲಿಂಗ್ (ಜೆ.ಗೋ) ಬಗ್ಗೆ ಗೊತ್ತಿರದವರಿಗೆ, ಆತ JAVA ಎಂಬ Technology ಕಂಡುಹಿಡಿದ ಮಹಾನುಭಾವ... ಅತ್ಯಂತ ಬುಧ್ದಿಶಾಲಿ ಮತ್ತು ಮೇಧಾವಿ... ಅಂತಃ ಜೇ.ಗೋನ ಶಿಶ್ಯ ಹಾಲೋಶಿಯನ್ನು 48 ಘಂಟೆಗಳ ಸತತ ಪರೀಕ್ಷೆಯಲ್ಲಿ ನಾ ಸೋಲಿಸಿದ್ದೆ... ಎರಡು ದಿನಗಳ ಕಾಲ ಎನನ್ನೂ ತಿನ್ನದೇ, ಕುಡಿಯದೇ... ಒಂದು ಕ್ಷಣವೂ ಕಣ್ಣು ಮುಚ್ಚದೇ ನಾ ಪಟ್ಟ ಪರಿಶ್ರಮ ಸಾರ್ಥಕವಾಗಿತ್ತು...

ಜೇ.ಗೋ ತನ್ನೆಲ್ಲಾ ವಿದ್ಯೆಯನ್ನು ಹಾಲೋಶಿಗೆ ಧಾರೆ ಎರೆದಿದ್ದ... ಹಗಲು ರಾತ್ರಿ ಆತನನ್ನು train ಮಾಡಿದ್ದ. ಹಾಲೋಶಿಯನ್ನು ಅದ್ವಿತೀಯನನ್ನಾಗಿ ಮಾಡುವುದಾಗಿ ಪಣ ತೊಟ್ಟಿದ್ದ.... ನನಗೋ ಜೇ.ಗೋನ ಪುಸ್ತಕಗಳೇ ಗುರು.. ಅವನ ಬ್ಲಾಗುಗಳೇ ಮಾರ್ಗದರ್ಶನ... ನನ್ನ ರೂಮಿನಲ್ಲಿ ಆತನ photo ಒಂದನ್ನು ನೇತು ಹಾಕಿ ಪೂಜಿಸುತ್ತಿದ್ದೆ... ನನ್ನ Laptopಗೂ ಅವನದೇ wallpaper. ಅಂದು ಆ ಏಕಲವ್ಯ ದ್ರೋಣಾಚಾರ್ಯರ ಮೂರ್ತಿಯನ್ನಿಟ್ಟುಕೊಂಡೇ ಬಿಲ್ವಿದ್ಯೆ ಕಲಿತಂತೆ ನಾ ಜೇ.ಗೋನ photo ಇಟ್ಕೋಂಡೇ JAVA ಕಲಿತಿದ್ದೆ... ಅಂದು ಅರ್ಜುನನ್ನ ಏಕಲವ್ಯ ಸೋಲಿಸಿದಂತೆ ಹಾಲೋಶಿಯನ್ನು ನಾ ಸೋಲಿಸಿದ್ದೆ... Best Java Programmer ಆಗಿದ್ದೆ..

ಪ್ರಶಸ್ತಿ ಸ್ವೀಕರಿಸಿ ವೇದಿಕೆಯಿಂದ ಕೆಳಗಿಳಿದು ಬಂದೆ... ಎದುರಿಗೆ ಸಾಕ್ಷಾತ್ ಜೇ.ಗೋ... ಒಂದು ಕ್ಷಣ ಹಾಗೇ STILL ಆಗ್ಬಿಟ್ಟೆ... ಆ ದೇವರೇ ಎದುರಿಗೆ ಬಂದಂತೆ... ಅವನ್ ಜೊತೆ ಹಾಲೋಶಿ ಇದ್ದ... ಇಬ್ಬರು ಒಬ್ಬರನ್ನೊಬ್ಬರು ಅಭಿನಂದಿಸಿದೆವು...

ಜೇ.ಗೋ : Congrats

ನಾನು ತಕ್ಷಣ ಆತನ ಕಾಲಿಗೆ ಬಿದ್ದು... ಪ್ರಶಸ್ತಿಯನ್ನು ಆತನ ಕಾಲ ಬಳಿ ಇಟ್ಟು ಹೇಳಿದೆ... ಗುರುಗಳೇ ಇದು ನಿಮ್ಮದು...

ಜೇ.ಗೋ : ಏನಪ್ಪ ಇದು.. ನಾನು? ನಿನ್ನ ಗುರು?

ನಾನು : ಹೌದು ಗುರುಗಳೆ...

ನಾನು ಅವನ ಬುಕ್ಕುಗಳನ್ನು ಓದಿ ಕಲಿತಿದ್ದು... ಆತನ photoಗೆ ಪೂಜೆ ಮಾಡೋದು ಎಲ್ಲಾ ಹೇಳಿದೆ... ಆತನ ಮುಖದಲ್ಲಿ ಸಂತಸ...

ಜೇ.ಗೋ : ತುಂಬಾ ಸಂತೋಷ... ಹೀಗೇ ಸಾಧಿಸುತ್ತಿರು... ಈ ಪ್ರಶಸ್ತಿ 100% ನಿನ್ನದೆ... ತೊಗೋ ತೊಗೋ...

ಇದನ್ನೆಲ್ಲಾ ಕೇಳುತ್ತಿದ್ದ ಹಾಲೋಶಿ ಜೇ.ಗೋನ ಕಿವಿಯಲ್ಲಿ ಏನೋ ಗುಸು ಗುಸು ಹೇಳಿದ... ಇಬ್ಬರ ನಡುವೆ ಅದೇನೋ ಮಾತುಕಥೆ ನಡೆಯುತ್ತಿತ್ತು... ನಾನು ಇನ್ನೂ ಕಣ್ಣುಗಳನ್ನು ನಂಬಲಾಗದೇ ಆತನನ್ನೇ ನೋಡಿ ಆರಾಧಿಸುತ್ತಿದ್ದೆ... ಜೇ.ಗೋ ನನ್ನ ಕಡೆ ತಿರುಗಿದ... ಆತನ ಮುಖದಲ್ಲಿ ನಗು ಮಾಯವಾಗಿತ್ತು... ಅತ್ತ ಕೋಪವೂ ಅಲ್ಲದ.. ಇತ್ತ ಕಸಿವಿಸಿಯೂ ಅಲ್ಲದ ಒಂದು ಭಾವನೆ ವ್ಯಕ್ತವಾಗುತ್ತಿತ್ತು... ಗಡುಸಾದ ಧ್ವನಿಯಲ್ಲಿ ಆತ ಹೇಳಿದ...

ಜೇ.ಗೋ : ನೋಡು ಹುಡುಗ... ನಾನು ಇಂದಿನ ವರೆಗೂ ಹಣ ಪಡೆಯದೇ ಯಾರಿಗೂ ವಿದ್ಯಾದಾನ ಮಾಡಿಲ್ಲ.. ಯಾರನ್ನೂ train ಮಾಡಿಲ್ಲ.. ನೀನು ನನ್ನ ಗುರು ಅಂಥ ಹೆಳ್ತಿದ್ದೀಯ ಸೊ ನೀನು ನನಗೆ ಗುರು ದಕ್ಷಿಣೆ ಕೊಡಬೇಕಾಗುತ್ತದೆ... ಸಿಧ್ದನಾಗು...

ಇದೆಲ್ಲಾ ಹಾಲೋಶಿಯದೇ ಕುತಂತ್ರ ಎಂದು ತಿಳಿದರೂ ನಾನು ಏನೂ ಹೇಳುವ ಸ್ಥಿತಿಯಲ್ಲಿರಲಿಲ್ಲ... ಜೇ.ಗೋನಿಂದ ಇಂತಹದೊಂದನ್ನು ನಿರೀಕ್ಷಿಸಿರಲಿಲ್ಲ... ಆತನ ಮುಂದೆ ಮಂಡಿಯೂರಿ ಕುಳಿತುಬಿಟ್ಟೆ...

ನಾನು : ಗುರುಗಳೇ ನಾನು ಹಣವಂತನಲ್ಲ... ಇಷ್ಟಕ್ಕೂ ನಾನು ಕೆಲಸ ಮಾಡುವುದು HCL Company ಗೆ... ಸೋ ಕಡು ಬಡವ ನಾನು... ಬೇಕಿದ್ದರೆ ನನ್ನ ಪ್ರಾಣವ ಕೊಡಬಲ್ಲೆ.. ಅಥವಾ ಆ ಏಕಲವ್ಯನಂತೆ ನನ್ನ ಕೈ ಬೆರಳನ್ನು ಕೊಡಬಲ್ಲೆ...

ಜೇ.ಗೋಗೆ ಒಂದು ಕ್ಷಣ ಏನೂ ತೋಚಲಿಲ್ಲವೆಂದೆನಿಸುತ್ತದೆ... ಮತ್ತದೇ ಹಾಲೋಶಿ ಕಿವಿಯಲ್ಲಿ ಏನೋ ಊದಿದ...

ಜೇ.ಗೋ : ಸರಿ ಸರಿ... ನಾ ನಿನ್ನ ಬಳಿ ಹಣದ ಬದಲು ಬೇರೆನನ್ನಾದರೂ ಕೇಳುವೆ...

ನಾನು : ಧಾರಾಳವಾಗಿ... ಪ್ರಾಣವನ್ನಾದರೂ ಕೊಡುವೆ...

ಜೇ.ಗೋ : ಅದನ್ನಿಟ್ಟುಕೊಂಡು ನಾ ಏನು ಮಾಡಲಿ... ನನ್ನ ಗುರುದಕ್ಶಿಣೆ ಏನೆಂದರೆ... ಇನ್ನು ಮುಂದೆ ನೀನು Cntrl C / Copy ಮತ್ತು Cntrl V / Paste ಉಪಯೋಗಿಸಬಾರದು... Google Search ಮರೆತುಬಿಡಬೇಕು... ನೀ ಉಪಯೋಗಿಸುವ ಪ್ರತಿ computer ನಿಂದ keyboard ನಿಂದ ಈ ಕ್ಷಣದಲ್ಲೆ copy/paste options ಮಾಯವಾಗುತ್ತವೆ... ಜೀವನದಲ್ಲಿ ಇನ್ನೊಮ್ಮೆ ನೀನು Google Search ತೆಗೆದಲ್ಲಿ ನಿನ್ನ ಕಣ್ಣುಗಳು ಹೋಗುತ್ತವೆ.. ನಿನ್ನ ದೃಷ್ಟಿ ಕಳೆದುಕೊಳ್ಳುವೆ ಜೋಪಾನ....

ಶಿವ ಶಿವ... ಗುರುದಕ್ಷಿಣೆಯ ಹೆಸರಲ್ಲಿ ಇಂತಃ ಶಿಕ್ಷೆಯೆ? ಒಬ್ಬ ಶಿಶ್ಯನ ಉಧ್ದಾರಕ್ಕಾಗಿ ಇನ್ನೊಬ್ಬನ ಬಲಿಯೆ? ನನ್ನ ಬೆರಳುಗಳನ್ನು
ಕಿತ್ತುಕೊಂಡಿದ್ದರೂ ಬದುಕುತ್ತಿದ್ದೆ...ಇದಕ್ಕಿಂತ ನನ್ನ ಪ್ರಾಣ ತೆಗೆದಿದ್ದರೇ ವಾಸಿಯಿತ್ತು... copy/paste ಇಲ್ಲದೇ ನಾ ಹೇಗೆ coding ಮಾಡಲಿ... google ಇಲ್ಲದೇ ನಾ ಹೇಗೆ code ಕದಿಯಲಿ... ಹೇಗೆ ಕೆಲಸ ಮಾಡಲಿ? ಇದು ಗೊತ್ತಾಗುತ್ತಿದ್ದಂತೆ ಕೆಲಸ ಕಳೆದುಕೊಳ್ಳುವೆ... ಬೇರೆ ಯಾರೂ ನನಗೆ ಕೆಲಸ ಕೊಡಲಾರರು... code ಕದಿಯಲು ಆಗದವನಿಗೆ ಯಾರು ತಾನೆ ಕೆಲಸ ಕೊಟ್ಟಾರು? ಕೊಟ್ಟರೂ ಆತ ಏನು ಕೆಲಸ ಮಾಡಿಯಾನು? ಮಾಡಬಲ್ಲ? copy/paste ಇಲ್ಲದ, google ಇಲ್ಲದ s/w engineer ನ ಜೀವನವನ್ನಾದರೂ ಊಹಿಸಿಕೊಳ್ಳಬಲ್ಲಿರಾ? ಚಿ ಚಿ... ಇದಕ್ಕಿಂತ ಮರಣವೇ ಲೇಸು..
ಒಂದೊಮ್ಮೆ ಆ ದ್ರೋಣಚಾರ್ಯರು, ಅರ್ಜುನ ಏಕಲವ್ಯ ಎಲ್ಲಾ ಕಣ್ಣ ಮುಂದೆ ಬಂದು ಹೋದರು... ಅಂದು ಆ ಏಕಲವ್ಯನಿಗೆ ಆದ ಸಂಕಟ ನನಗಿಂದು ಅರ್ಥವಾಗುತ್ತಿತ್ತು... ಛೆ... ಹೀಗೇ ಈ ಭೂಮಿ ಇಲ್ಲೇ ಬಾಯಿ ಬಿಟ್ಟು ನನ್ನ ನುಂಗಿಬಿಡಬಾರದೇ ಎನಿಸುತ್ತಿತ್ತು... ಹಾಗೆ ಆಗಲಿ ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೆ....

ಟರ್ ರ್ ರ್ ರ್ ರ್ ರ್ ರ್ ರ್ ರ್ ರ್ ರ್ ರ್ ರ್ ಎಂಬ ಕರ್ಕಶ ಶಬ್ಧ ಕಿವಿ ಹರಿವಂತೆ ಕೇಳಿ ಬಂತು... ನನ್ನ ಬೇಡಿಕೆ ಕೇಳಿಸಿಕೊಂಡ ದೇವರೇ ಭೂಮಿ ಒಡೆದನೆಂದುಕೊಂಡೆ... ಭೂಮಿ ನನ್ನ ನುಂಗುವುದೆಂದು ಕಾಯತೊಡಗಿದೆ... ಆ ಕರ್ಕಶ ಶಬ್ಧ ಹಾಗೇ ಮುಂದುವರೆಯುತ್ತಿತ್ತು...

ಥೂ ಥೂ ಥೂ ಅವ್ನಜ್ಜಿ ಇದು ನಮ್ಮ ಬೆಳಗಿನ ಅಲಾರಮ್ಮು... ಥೂ ಅವ್ನಕ್ಕ*#$@! $#@!^ ಇದುವರೆಗೂ ಆಗಿದ್ದೆಲ್ಲಾ ಕನಸು.. ಅಯ್ಯಪ್ಪಾ ಒಳ್ಳೆ ಜೀವ ಹೋದಂಗೇ ಅಗಿತ್ತು... $#@! &^%$# ಅದೆನೋ ಹೆಳ್ತಾರಲ್ಲಾ ತಿರ್ಕೊಂಡು ತಿನ್ನೋರ್ನ..... ಎಲ್ಲಾ ಬಿಟ್ಟು ನೀನು "Best Java Programmer"... ಹ್ಹ ಹ್ಹ ಹ್ಹ ಕನ್ನಡೀಲಿ ಮುಖ ನೋಡ್ಕೊಳ್ಳೋ ಗೂಬೆ ಅಂತೆಲ್ಲಾ ನನ್ನ್ ನಾನೆ ಬೈಕೊಂಡೆ.... ಯಾವಾಗಲೂ ತಲೆ ಮೇಲೆ ಕುಟ್ಟಿ ಸ್ನೂಝ್ ಮಾಡಿ ಇನ್ನೊಂದ್ ಅರ್ಧ ಗಂಟೆ ಮಲುಗ್ತಿದ್ದವ್ನು ಆ ಭಯಂಕರ ಕನಸಿಗೆ ತತ್ತರಿಸಿ ಹೋಗಿದ್ದೆ... ಆಲ್ಮೋಸ್ಟ್ ಹೋದ ಜೀವ ಮತ್ತೆ ಬಂದಂಗಾಗಿತ್ತು... ದಡಬಡಾ ಎದ್ದು.. ಒಂದೆರಡ್ ಚಂಬು ನೀರು ಹುಯ್ಕೊಂಡು ಆಫೀಸಿಗೆ ಓಡಿದೆ... ಸೀಟ್ ಗೆ ಹೋಗಿ 1st keyboard ನೋಡಿದೆ... Cntrl C V ಇದೆ ಅಂಥ confirm ಮಾಡ್ಕೊಂಡೆ... copy paste option ಕೂಡ ಇತ್ತು... ಒಂದ್ ಸಲ google ತೆಗೆದು search ಮಾಡಿ ನೋಡಿದೆ... ಕಣ್ಣು ಸರಿಯಾಗೇ ಕಾಣಿಸ್ತಿತ್ತು... ಸದ್ಯ ಬದುಕಿದೆಯಾ ಬಡ s/w engineer ಅಂಥ ನಿಟ್ಟುಸಿರುಬಿಟ್ಟೆ... ಸಧ್ಯ ಕೆಲಸ ಉಳೀತು....

Monday, May 21, 2007

ಥೂ...ಉಪ್ಪಿಟ್ಟಾ!!!!

"ಥೂ... ನನಿಗೆ ಇವತ್ತು ತಿಂಡಿ ಬೇಡ"....ನೆನಪಿಸಿಕೊಳ್ಳಿ, ನೀವು ಹೀಗೆ ಎಷ್ಟು ಸಲ ಹೇಳಿದ್ದೀರಾ? ಹೌದಲ್ವಾ ಪ್ರತಿ ಸಲ ಮನೇಲಿ ತಿಂಡಿ ಉಪ್ಪಿಟ್ಟು ಅಂಥ ಗೊತ್ತಾದ ತಕ್ಷಣ ಮೊದಲು ಉದುರುವ ನುಡಿ ಮುತ್ತುಗಳಿವು. ಯಾಕ್ರಿ ಆಶ್ಚರ್ಯ? ಅಷ್ಟು ಕರೆಕ್ಟಾಗಿ ಹೇಗೆ ಹೇಳಿದೆ ಅಂಥಾನ? ಈ ಉಪ್ಪಿಟ್ಟಿನ ಆಕ್ರಮಣ ಎದುರಿಸದೇ ಇರುವವರು ಯಾರ್ರಿ ಇದಾರೆ? "ಹೋಗಮ್ಮ ನೀನು ಯಾವಾಗ್ಲೂ ಉಪ್ಪಿಟ್ಟು ಮಾಡ್ತಿಯ....", ತಿಂಗಳಿಗೊಮ್ಮೆ ಉಪ್ಪಿಟ್ಟು ಮಾಡಿದ್ರೂ ನಾನು ಅದನ್ನು ಸಂಪೂರ್ಣವಾಗಿ ಪ್ರತಿಭಟಿಸುತ್ತಿದ್ದ ರೀತಿ ಇದು. ಒಂದರ್ಥದಲ್ಲಿ ಉಪ್ಪಿಟ್ಟು ಮನುಷ್ಯಮಾತ್ರದವರು ತಿನ್ನಲಾರದಂಥ/ತಿನ್ನಬಾರದಂಥ ವಸ್ತು ಎಂಬ ಖಚಿತ ನಿಲುವು... ನಮ್ಮಪ್ಪ ಅದಕ್ಕೊಂದು ಉಪನಾಮ (alias name) ಕೂಡ ಕೊಟ್ಟಿದ್ರು... Easy Tiffin of a Lazy Woman ಅಂಥ. ಹಾಸ್ಯಕವಿ ದುಂಡಿರಾಜ್ ಹೇಳ್ತಾರೆ...

ಅವನ ಮುಖ ಕಪ್ಪಿಟ್ಟಿತ್ತು....
ಏಕೆ?
ಏಕೆಂದರೆ ಎದುರಿಗೆ ಹೆಂಡತಿ ಮಾಡಿದ ಉಪ್ಪಿಟ್ಟಿತ್ತು.

ಉಪ್ಪಿಟ್ಟು ಸರ್ವರಿಂದಲೂ ಸಮಾನವಾಗಿ ದ್ವೇಶಿಸಲ್ಪಡುವುದು ಜಗಜ್ಜಾಹಿರವಾದ ಸಂಗತಿ... ನಮ್ಮಲ್ಲಿ ಹಲವರು ಅವಕಾಶವಿದ್ದಲ್ಲಿ ಉಪ್ಪಿಟ್ಟು ಮಾಡಿದವರ ಹಾಗೂ ಮಾಡುವವರ ಮೇಲೆ Attempt To Murder ಕೇಸ್ ಹಾಕುವ ಬಗ್ಗೆಯೂ ಯೋಚಿಸಿರಬಹುದು... Unfortunately ಅದು ಇಂದಿನ ಕಾನೂನು ವ್ಯವಸ್ಥೆಯಲ್ಲಿ ಆಗದಿರುವ ಸಂಗತಿ. ಯೋಚಿಸಿ ನೋಡಿ... ನೆನಪಿಸಿಕೊಳ್ಳಿ... ನೀವು ನಿಮ್ಮ ಹೆಂಡತಿಯೊಡನೆ ಜಗಳವಾಡಿದ ಮರುದಿನವೆಲ್ಲಾ ತಿಂಡಿ "ಉಪ್ಪಿಟ್ಟು" ಅಲ್ವಾ? ಒಂದೋ ಎರಡೋ ಬಾರಿಯಾಗಿದ್ರೆ ಕಾಕತಾಳೀಯ (coincidence) ಅನ್ನಬಹುದಿತ್ತು... ಆದರೆ ಪ್ರತಿ ಸಲವೂ ಜಗಳದ ಫಲ ಉಪ್ಪಿಟ್ಟು... So ಇದು ಒಂದು powerfull ಸೇಡಿನ ಅಸ್ತ್ರ ಅಂಥ ಎಂದೂ ನಿಮಗನ್ನಿಸಿಲ್ಲವೇ? ಇನ್ನು "ಹಂಗೇನಿಲ್ಲ... ಉಪ್ಪಿಟ್ಟು ನನಿಗೆ ತುಂಬಾ ಇಷ್ಟ" ಅನ್ನೋರು ಒಂದೋ ದಿನಾ ಜಗಳ ಆಡಿ ಮಾರನೇ ದಿನ ಉಪ್ಪಿಟ್ಟು ತಿಂದು ಅಭ್ಯಾಸ ಆಗಿರೋರು ಅಥವಾ ಪ್ರತಿಭಟನೆ ವ್ಯರ್ಥ ಪ್ರಯತ್ನ ಎಂದು ಅರಿವಾದ ಜಾಣರು...

ಆದ್ರೂ ಒಮ್ಮೊಮ್ಮೆ ನಮ್ಮೀ ಅಸಡ್ಡೆ ಪೂರ್ವಾಗ್ರಹಪೀಡಿತವಾದದ್ದು ಅಂಥ ಅನ್ನಿಸಿದ್ದೂ ಇದೆ... ಉಪ್ಪಿಟ್ಟಿನ ಬಗ್ಗೆ ನಮ್ಮೀ ಧೋರಣೆ ಹಾಗೂ ಪಕ್ಷಪಾತಗಳು ತಪ್ಪೆನಿಸಿದ್ದೂ ಇದೆ... ಯಾಕೆ ಅಂದ್ರೆ ಉಪ್ಪಿಟ್ಟು ಎಂದು ಮನೆಯಿಂದ ಮೂಗು ಮುರಿದು ತಿಂಡಿ ತಿನ್ನದೇ ತಪ್ಪಿಸಿಕೊಂಡು ಹೋಗಿ ಮತ್ತೆ canteenನಲ್ಲಿ ತಿನ್ತಾ ಇದ್ದಿದ್ದು ಅದೇ "ಖಾರಾ ಭಾತ್"(a better version of ಉಪ್ಪಿಟ್ಟು) ಅಷ್ಟೇ ಯಾಕೆ ನೀವು ಹೆಣ್ಣು ನೋಡಲು ಹೋದಾಗ ಸಿಕ್ಕಿದ್ದಿದ್ದೂ ಅದೇ "ಉಪ್ಪಿಟ್ಟು ಕಾಫಿ"(ನಿಮ್ ದುರದೃಷ್ಟ... ಆದ್ರೂ ಮದ್ವೆ ಆದ್ರಿ...) ಎಲ್ಲಾ Hotelಗಳ menuನಲ್ಲಿರೋ common and permanent item ಕೂಡಾ... So may be ತಿಳುವಳಿಕೆ ಬರೋ ಸಮಯದಲ್ಲಿ ಯಾರೋ ಉಪ್ಪಿಟ್ಟಿನ ಬಗ್ಗೆ ಮಾಡಿದ ಸುಳ್ಳು ಅಪವಾದವೊಂದು ನಮ್ಮ ಮನಸ್ಸಿನಲ್ಲಿ ಉಪ್ಪಿಟ್ಟಿನ ಬಗ್ಗೆ ಈ -ve imageನ್ನು ಸೃಷ್ಟಿಸಿರಬಹುದೆ?

ಜಾತಿ, ಮತ, ವರ್ಗ, ವರ್ಣ, ಗಂಡು, ಹೆಣ್ಣು ಎಂಬ ಭೇದವಿಲ್ಲದೇ ಎಲ್ಲರ ದುಃಸ್ವಪ್ನವಾಗಿರುವ ಉಪ್ಪಿಟ್ಟಿನ ಬಗ್ಗೆ ನನ್ನ ಮನಸ್ಸಿನಲ್ಲಿ ಈ ಸುನಾಮಿ ಅಲೆಗಳು ಎದ್ದಿದ್ದು New Jerseyಯ Indian Streetನ ಒಂದು South Indian Hotelನಲ್ಲಿ breakfastಗೆಂದು ಕೂತಾಗ... ಹೊರಗೆ ಸುರಿಯುತ್ತಿದ್ದ ಜಿಟಿ ಜಿಟಿ ಮಳೆ... ಕಿಟಕಿಯಿಂದ ಅದನ್ನೇ ಗುರಾಯಿಸುತ್ತಾ ಇದ್ದ ನಾನು... weekend ಹಾಳಾಗುವುದೆಂದೆಂಬ ಕಟು ಸತ್ಯ...ಆದರೆ ಏನೂ ಮಾಡಲಾಗದ ಆ ನಿಸ್ಸಹಾಯಕತೆ... ಇವೆಲ್ಲಾ ಒಂದಾಗಿ, ಏನೋ ವ್ಯಕ್ತಪಡಿಸಲಾಗದ ಒದ್ದಾಟಕ್ಕೆ ಕಾರಣವಾಗಿದ್ದವು...

ಅಂತ್ಯವಿಲ್ಲದ ಆಕಾಶದಂತೆ, ಲಂಗು ಲಗಾಮಿಲ್ಲದೆ ಸಾಗುತ್ತಿದ್ದ ನನ್ನ ಉಪ್ಪಿಟ್ಟಿನ ಬಗೆಗಿನ ಯೋಚನೆಗಳಿಗೆ ಪೂರ್ಣವಿರಾಮ ಇಡುವಂತೆ ಒಂದು ಗಡುಸಾದ ಧ್ವನಿ ನನ್ನೆಡೆಗೆ ತೂರಿ ಬಂತು... Supplierದು... ತನ್ನ ಕೈಲಿದ್ದ ತಟ್ಟೆ ಲೋಟಗಳನ್ನು ಕೆಳಗಿಡುತ್ತಾ ಆತ ಹೇಳಿದ್ದ...

"ತೊಗೊಳ್ಳಿ ಸಾ... ನೀವು order ಮಾಡಿದ್ದ ಉಪ್ಪಿಟ್ಟು ಮತ್ತು ಕಾಫಿ".

ಅದನ್ನ ಸವಿದು ಹೊರನಡೆಯುವಾಗ ಮಾತು ಬಾರದ ಮನಸ್ಸು ತಿಳಿ ಕಣ್ಣೀರ ಭಾಷೆಯಲಿ ಕೂಗಿ ಕೂಗಿ ಹೇಳುತ್ತಿತ್ತು..."ಆಮ್ಮಾ I miss u a lot... and of course ur ಉಪ್ಪಿಟ್ಟು also"